1. ಹೆತ್ತವರ ಬದುಕು ಪ್ರೇರಕ
ಮಣ್ಣಿನ ಗೋಡೆ. ಸಗಣಿ ಸಾರಿಸಿ ನಯಗೊಳಿಸಿದ ನೆಲ. ಜಗುಲಿ, ಒಳಗಿನ ಅಡುಗೆ ಮನೆ, ಹಿಂಭಾಗದ ಹಿತ್ತಲು ಬಾಗಿಲ ಹಿಂದಿನ ಚಡಿ ಒಂದು ಮಟ್ಟದಲ್ಲಿದ್ದರೆ, ಜಗುಲಿಯಿಂದ ಮೊಣಕಾಲು ಅಂತರ ಕೆಳಗೆ ಕಡಿಮಾಡು, ಪಕ್ಕಕ್ಕೆ ಹೊರಳಿ ವಿಸ್ತರಿಸಿದ ಚೌಕಿಯ ಭಾಗ ಇನ್ನೊಂದು ಮಟ್ಟದಲ್ಲಿ. ಜಗುಲಿಯಿಂದ ಒಳಮನೆಗೆ ಒಂದು ಬಾಗಿಲು, ಹಿಂದೆ ಒಂದು ಬಾಗಿಲು. ಇಷ್ಟೇ ಭದ್ರತೆ. ಮರದ ಪೆಟ್ಟಿಗೆಗೆ ಒಳಮನೆಯಲ್ಲಿ ಜಾಗ. ಐದು ಅಡಿ ಉದ್ದ ಒಂದು ಅಡಿ ಅಗಲದ ಮರದ ಪೆಟ್ಟಿಗೆಯಲ್ಲಿ ಚಿಕ್ಕದೊಂದು ಸಂದೂಕ. ಅದು ಮನೆಯ ತಿಜೋರಿ. ಮರದ ಪೆಟ್ಟಿಗೆಯ ಬಾಗಿಲು ತೆಗೆಯುವಾಗ ದೊಡ್ಡದಾಗಿ ಕೀರಲು ಸದ್ದು ಬರುತ್ತಿದ್ದ ಕಾರಣ ಸಪ್ಪಳ ಮಾಡದೆ ಮನೆಯ ತಿಜೋರಿಯನ್ನು ಯಾರಿಗೂ ಮುಟ್ಟಲು ಸಾಧ್ಯವಿರುತ್ತಿರಲಿಲ್ಲ. ಜಗುಲಿಗೂ, ಕೆಳಕ್ಕೆ ವಿಸ್ತರಿಸಿದ್ದ ಚೌಕಿ ಮನೆಗೂ ಮೂರು ಕಡೆ ಮಣ್ಣಿನ ಗೋಡೆಯ ಆಸರೆ. ಜಗುಲಿ ಕೆಳಗಿನ ಪಾತಾಳಂಕಣವೂ ಚೌಕಿಯ ವಿಸ್ತರಿಸಿದ ಭಾಗವೂ ಅಂಗಳದ ಕಡೆಗೆ ತೆರೆದುಕೊಂಡಿದ್ದವು. ಜಗುಲಿ, ಕೆಳಗಿನ ಪಾತಾಳಂಕಣ, ಚೌಕಿಯಲ್ಲಿ ಮಲಗಿದವರಿಗೆ ತಲೆಯ ಮೇಲೆ ಸೂರು ಇದೆಯೆಂಬಷ್ಟೇ ಸಮಾಧಾನ. ಅಂಗಳಕ್ಕೂ ಚೌಕಿಗೂ ಮಧ್ಯೆ ಯಾವ ಅಡೆತಡೆಯೂ ಇರಲಿಲ್ಲ. ಅಡುಗೆ ಮನೆಗೆ ಹೊಂದಿಕೊಂಡ ಒಳಮನೆಯಲ್ಲಿ ಮಲಗಿದವರಿಗೆ ಮಾತ್ರ ಸುತ್ತ ಗೋಡೆಯ ರಕ್ಷಣೆ ಇರುವ ಭಾವ. ಸೂರು ಹುಲ್ಲಿನದು.
ಒಂದನೆಯ ತರಗತಿಗೆ ಸೇರುವಷ್ಟು ದೊಡ್ಡವನಾಗಿದ್ದಾಗ ನನಗೆ ನೆನಪಿಗೆ ಬರುವ ನಮ್ಮ ಮನೆಯ ಚಿತ್ರ ಇದು. ಆರು ಗಂಡು ಎರಡು ಹೆಣ್ಣು ಮಕ್ಕಳ ದೊಡ್ಡ ಸಂಸಾರ ಅಪ್ಪನದು. ನಾನು ಐದನೆಯ ಮಗ. ನನಗೆ ನಾಲ್ಕು ಜನ ಅಣ್ಣಂದಿರು, ಇಬ್ಬರು ಅಕ್ಕಂದಿರು. ಒಬ್ಬ ತಮ್ಮ. ಐದು ತುಂಬಿ ಆರು ನಡೆಯುತ್ತಿರುವಾಗ ಮನೆಯಿಂದ ಮೂರು ಕಿಲೋಮೀಟರ್ ದೂರದ ಶಾಲೆಗೆ ಒಂದನೆಯ ತರಗತಿಗೆ ಸೇರಿಕೊಂಡಾಗ ಅಣ್ಣಂದಿರಿಬ್ಬರ ಮದುವೆಯಾಗಿತ್ತು. ದೊಡ್ಡ ಅಕ್ಕನೂ ಮದುವೆಯಾಗಿ ಗಂಡನ ಮನೆಯಲ್ಲಿದ್ದಳು. ಆ ದಿನಗಳಲ್ಲಿ ಇಬ್ಬರು ಅತ್ತಿಗೆಯರು ಅವ್ವನೊಟ್ಟಿಗೆ ಅಡುಗೆ ಮತ್ತು ಗದ್ದೆಯ ಕೆಲಸಗಳಲ್ಲಿ ಕೈ ಜೋಡಿಸುತ್ತಿದ್ದರು. ಮದುವೆಯಾದ ಇಬ್ಬರು ಅಣ್ಣಂದಿರ ಒತ್ತಿನ ಇನ್ನೊಬ್ಬ ಅಣ್ಣ ಶಾಲೆಗೆ ಶರಣು ಹೊಡೆದು ರೈತಾಪಿ ಕೆಲಸಕ್ಕೆ ಮರಳಿದ್ದ. ದೊಡ್ಡ ಅಣ್ಣ ನಾನು ಹುಟ್ಟಿದ ವರ್ಷ (1953) ಮೆಟ್ರಿಕ್ನಲ್ಲಿ ಪಾಸಾಗಿದ್ದು ಮುಂದೆ ಓದುವ ಅನುಕೂಲ ಇಲ್ಲದ ಕಾರಣ ಮನೆಗೆ ವಾಪಸಾಗಿ ಅಪ್ಪನ ಜತೆ ಬೇಸಾಯದ ಕೆಲಸದಲ್ಲಿ ಕೈ ಜೋಡಿಸಿದ್ದ. ಎರಡನೇ ಅಣ್ಣ ಮಿಡ್ಲ್ ಸ್ಕೂಲಿಗೆ ಶರಣು ಹೊಡೆದಿದ್ದ. ಶಾಲೆಯ ಮೇಷ್ಟರುಗಳು ಹಳ್ಳಿ ಹುಡುಗರು ಮನೆಪಾಠ ಮಾಡಿಕೊಂಡು ಬರುತ್ತಿಲ್ಲ ಎಂದು ವಿಧಿಸುತ್ತಿದ್ದ ಉಗ್ರ ಶಿಕ್ಷೆಗಳಿಗೆ ಹೆದರಿ ಅವನು ಶಾಲೆಗೆ ತಪ್ಪಿಸಿಕೊಂಡಿದ್ದನಂತೆ. ಶಾಲೆಯಲ್ಲಿ ಗಣಿತ, ಇಂಗ್ಲಿಷಿನ ಕಠಿಣ ಅಭ್ಯಾಸಕ್ಕಿಂತ ಮನೆ ಬದಿಯಲ್ಲಿ ಸ್ವಂತ ಗದ್ದೆ ತೋಟಗಳಲ್ಲಿ ಮೈ ಬಗ್ಗಿಸಿ ಕೆಲಸ ಮಾಡುವುದೇ ಸುಲಭವೆಂದು ಆವನು ಆಗ ಪರಿಗಣಿಸಿದ್ದನೆಂದು ಮುಂದೆ ಎಷ್ಟೋ ವರ್ಷಗಳ ನಂತರ ನನಗೆ ಗೊತ್ತಾಗಿತ್ತು. ನನ್ನ ಎರಡನೇ ಅಕ್ಕನ ಒತ್ತಿನ ಇನ್ನೊಬ್ಬ ಅಣ್ಣ ಹಳ್ಳಿ ಶಾಲೆಯಿಂದ ತೇರ್ಗಡೆಯಾಗಿ ಮಾಧ್ಯಮಿಕ ಶಾಲೆಯಲ್ಲಿ ಓದು ಮುಂದುವರಿಸಲು ಆಗ ರಿಪ್ಪನ್ಪೇಟೆಯ ಸಮೀಪ ಇದ್ದ ಸೋದರ ಮಾವನ ಮನೆಯಲ್ಲಿದ್ದ. ಸಾಗರ- ತೀರ್ಥಹಳ್ಳಿ ಸಕರ್ಾರಿ ರಸ್ತೆಯಲ್ಲಿ ರಿಪ್ಪನ್ಪೇಟೆ - ಹೊಂಬುಚದ ಮಧ್ಯೆ ಇರುವ ಹೆದ್ದಾರಿಪುರ ಎಂಬ ಊರಿಗೆ ಒಂದೂವರೆ ಕಿಲೋಮೀಟರ್ ಒಳಗಡೆ ಇರುವ ನಮ್ಮೂರು ಕೊಡಸೆಗೆ ಆಗ ಹತ್ತಿರದ ಶಾಲೆ ಎಂದರೆ ಅಲ್ಲಿಂದ ಮೂರು ಕಿಲೋಮೀಟರ್ ದೂರದ ಕಣಬಂದೂರು ಶಾಲೆ. ಅದಕ್ಕೆ ಕೋಡಿಕೊಪ್ಪ ಎಂಬ ಇನ್ನೊಂದು ಹೆಸರೂ ಇತ್ತು. ಅಲ್ಲಿ ಒಂದರಿಂದ ನಾಲ್ಕನೆಯ ತರಗತಿಯವರೆಗೆ ಕಲಿಸುವ ವ್ಯವಸ್ಥೆ ಇತ್ತು. ನಾನು ಒಂದನೆಯ ತರಗತಿಗೆ ಸೇರಿದ್ದಾಗ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದವರು ಗಿರಿಯಪ್ಪ ಎಂಬುವರು. ಸಣ್ಣದೊಂದು ಚುಳುಕಿನ ಬೆತ್ತವನ್ನು ಮೇಜಿನ ಮೇಲೆ ಸದಾ ಇಟ್ಟುಕೊಂಡಿರುತ್ತಿದ್ದ ಬಿಳಿ ಟೋಪಿಯ ಗಿರಿಯಪ್ಪ ಮೇಷ್ಟರು ಬೆತ್ತವನ್ನು ಝಳಪಿಸಿದ ಮಾತ್ರದಿಂದಲೇ ಅಳ್ಳೆದೆಯ ಹುಡುಗ- ಹುಡುಗಿಯರಲ್ಲಿ ತುತರ್ು ಮೂತ್ರವಿಸರ್ಜನೆಗೆ ಕಾರಣರಾಗುತ್ತಿದ್ದರೆಂಬ ಖ್ಯಾತಿ ಗಳಿಸಿದ್ದರು.
ಮಲೆನಾಡಿನ ಹೆಚ್ಚಿನ ಹಳ್ಳಿಗಳಂತೆ ನಮ್ಮದು ಒಂಟಿ ಮನೆಯ ಊರು. ಆದರೆ ನಾನು ಹುಟ್ಟಿದ ವರ್ಷ ನಮ್ಮ ಮೂಲಮನೆ ಹಿಸ್ಸೆಯಾಗಿತ್ತು. ಚಿಕ್ಕಪ್ಪ, ದೊಡ್ಡಪ್ಪಂದಿರ ಮಕ್ಕಳೆಲ್ಲ ತಮಗೆ ಬಂದ ಗದ್ದೆ ಹೊಲಗಳ ಬದಿ ಮನೆ ಮಾಡಿಕೊಂಡಿದ್ದರು. ಮೂಲಮನೆಯನ್ನು ತ್ಯಜಿಸಿ ಬಂದಿದ್ದ ಅಪ್ಪ ನಮ್ಮ ಪಾಲಿಗೆ ಬಂದಿದ್ದ ಗದ್ದೆ ತೋಟದ ಸನಿಹದಲ್ಲಿ ಆಗ ದುರ್ಗಮವಾಗಿದ್ದ ಕಾಡನ್ನು ಕಡಿದು ಹುಲ್ಲುಮನೆ ಹಾಕಿಕೊಂಡಿದ್ದ. ಒಟ್ಟು ಕುಟುಂಬದ ಯಜಮಾನಿಕೆ ನಡೆಸುತ್ತಿದ್ದ ಅಪ್ಪ ಆ ಧೈರ್ಯದಿಂದಲೇ ಮಕ್ಕಳಿಗೆ ಶಿಕ್ಷಣ ಕೊಡಿಸಲು ವ್ಯವಸ್ಥೆ ಮಾಡಿದ್ದ. ಮನೆ ಪಾಲಾದ ಮೇಲೆ ಹೆಚ್ಚಿನ ಆಥರ್ಿಕ ಹೊಣೆಯನ್ನು ಹೊರಲು ಅಸಮರ್ಥನಾದ ಕಾರಣ ದೊಡ್ಡಣ್ಣ ಮುಂದೆ ಓದಲು ಆಗಿರಲಿಲ್ಲ. ಆದರೆ ಎಲ್ಲ ಮಕ್ಕಳೂ ತಾವು ತೇರ್ಗಡೆ ಆಗುತ್ತಿರುವವರೆಗೆ ಓದುತ್ತಲೇ ಇರಬೇಕು, ಓದಿ ಏನಾದರೂ ನೌಕರಿ ಹಿಡಿಯಬೇಕು ಎಂಬುದು ಅಪ್ಪನ ಪ್ರಬಲ ಇಚ್ಛೆಯಾಗಿತ್ತು. ಆದ್ದರಿಂದಲೇ ನಮ್ಮ ಶಾಲಾ ಹಾಜರಾತಿಯ ಮೇಲೆ ಅವನ ಕಣ್ಣು ಇರುತ್ತಿತ್ತು. ಮೇಷ್ಟರ ಭಯದಿಂದ ಶಾಲೆ ತಪ್ಪಿಸಿಕೊಂಡರೆ ಗಿರಿಯಪ್ಪ ಮೇಷ್ಟರ ಬೆತ್ತದ ರುಚಿಯೇ ವಾಸಿ ಎನಿಸುವಷ್ಟು ಉಗ್ರವಾಗಿರುತ್ತಿತ್ತು ಅಪ್ಪನ ಕೋಪ ಮತ್ತು ಕೈ ಪೆಟ್ಟು.
ಊಟಕ್ಕೆ ಬತ್ತ ಆಗುವಷ್ಟು ಗದ್ದೆ ಮತ್ತು ಮೇಲು ಖಚರ್ಿಗೆ ಒದಗುವಷ್ಟು ಅಡಿಕೆ ತೋಟವಿದ್ದ ಕುಟುಂಬ ನಮ್ಮದು. ಬೆಳೆಯುತ್ತಿದ್ದ ಸಂಸಾರದ ಅಗತ್ಯಕ್ಕೆ ತಕ್ಕಂತೆ ಹೆಚ್ಚಿನ ಸಂಪಾದನೆಗೆ ಅಪ್ಪ ಒಂದಲ್ಲ ಒಂದು ಪ್ರಯತ್ನ ನಡೆಸುತ್ತಲೇ ಇದ್ದ. ಗದ್ದೆ- ತೋಟದ ಒತ್ತುವರಿ ಜಾಗದ ವಿಸ್ತರಣೆಯೇ ಆಗ ಉಳಿದಿದ್ದ ಮಾರ್ಗ. ದೊಡ್ಡ ಕುಟುಂಬದ ಯಜಮಾನಿಕೆ ನಡೆಸಿದ್ದ ಅಪ್ಪನಿಗೆ ಎರಡನೇ ತರಗತಿಯ ವರೆಗೆ ಮಾತ್ರ ಇದ್ದ ಓದು. 1905ರಲ್ಲಿ ಜನಿಸಿದ್ದ ಅಪ್ಪ ಅಷ್ಟೇ ಓದಿನ ಬೆಂಬಲದಿಂದ ಮುಂದೆ ಶಿವಮೊಗ್ಗದಲ್ಲಿ ಅಡಿಕೆ ಮಂಡಿಗಳಲ್ಲಿ ಮನೆಯ ಯಾವತ್ತೂ ವ್ಯವಹಾರಗಳನ್ನು ನಡೆಸಬಲ್ಲವನಾಗಿದ್ದ. ತನಗಿದ್ದ ಅಲ್ಪ ಅಕ್ಷರಾಭ್ಯಾಸದ ಬಲದಿಂದ ಗ್ರಾಮಪಂಚಾಯಿತಿ ಗ್ರಂಥಾಲಯಗಳಲ್ಲಿ ಸಿಗುತ್ತಿದ್ದ ಪುಸ್ತಕಗಳನ್ನು ತಂದು ನಿಧಾನವಾಗಿ ಓದುತ್ತಿದ್ದ. ಹಿತೋಪದೇಶದ ಕಥೆಗಳು, ರಾಮಾಯಣದ ಕಥೆಗಳು ಅಪ್ಪನ ಆಸಕ್ತಿಯಿಂದ ನಮಗೆ ಪ್ರಾಥಮಿಕ ಶಾಲೆಯ ಕಾಲದಲ್ಲಿಯೇ ಕಿವಿಗೆ ಬೀಳುತ್ತಿದ್ದವು.
ನಮ್ಮ ಗದ್ದೆ ತೋಟದಲ್ಲಿ ಮನೆಯವರೆಲ್ಲರೂ ದುಡಿಯಲೇ ಬೇಕಿತ್ತು. ನಮಗೆ ಶಾಲೆಯ ಅವಧಿ ಬಿಟ್ಟರೆ ಮನೆಯ ಎಲ್ಲ ಕೆಲಸಗಳಲ್ಲಿಯೂ ಕೈ ಹಾಕುವ ಅನಿವಾರ್ಯತೆ ಇತ್ತು. ಅಡಿಕೆ ಕೊಯ್ಲು ಮನೆಯವರೇ ಮಾಡುವ ಕೆಲಸ. ಅದರಲ್ಲಿಯೂ ಅಡಿಕೆಯನ್ನು ಸುಲಿದು, ಬೇಯಿಸಿ ಹದವಾದ ಬಿಸಿಲಲ್ಲಿ ಒಣಗಿಸಿ ಆರಿಸಿ ವ್ಯಾಪಾರಕ್ಕೆ ಅಣಿಗೊಳಿಸುವ ಕುಶಲ ಕೆಲಸವೆಲ್ಲ ಅಪ್ಪನ ವಿಶೇಷತೆ. ಅಡಿಕೆ ಸುಲಿತ ರಾತ್ರಿ ಬಹುಹೊತ್ತಿನವರೆಗೆ ಸಾಗುತ್ತಿದ್ದ ನೀರಸ ಕಾರ್ಯ. ಅಪ್ಪನ ಜೊತೆ ಅಣ್ಣಂದಿರು ಮೆಟ್ಟುಗತ್ತಿ ಎದುರಿಗೆ ಇಟ್ಟುಕೊಂಡು ಸುಲಿಯುತ್ತಿದ್ದಾಗ ಹೊರಬರುತ್ತಿದ್ದ ಕರಕರ ಶಬ್ದ ಈಗಲೂ ಆಪ್ಯಾಯಮಾನವಾಗಿ ಅನುರಣಿಸುವಂತಿದೆ. ಅಡಿಕೆ ಸುಲಿತದ ಏಕತಾನತೆಯನ್ನು ನಿವಾರಿಸಲು ಶಾಲೆಗೆ ಹೋಗುತ್ತಿದ್ದ ಹಾಗೂ ಕನ್ನಡವನ್ನು ಓದುವಷ್ಟು ಬೆಳೆದಿದ್ದ ನನಗೆ ಅವರಿಗಾಗಿ ಏನನ್ನಾದರೂ ಓದಿ ಹೇಳುವ ಕೆಲಸವನ್ನು ಅಪ್ಪ ಕೊಡುತ್ತಿದ್ದ. `ಕಾನೂರು ಸುಬ್ಬಮ್ಮ ಹೆಗ್ಗಡಿತಿ' ಕಾದಂಬರಿ ಅಡಿಕೆ ಸುಲಿತದ ಸಂದರ್ಭದಲ್ಲಿ ಓದಿ ಹೇಳಿದ್ದು ನನಗೆ ಬಾಲ್ಯದಲ್ಲಿಯೇ ಸಿಕ್ಕಿದ ಸಾಹಿತ್ಯದ ಸಂಸ್ಕಾರ. `ಹೆಗ್ಗಡಿತಿ' ಕಾದಂಬರಿ ಆಗ ಬಿಡಿ ಸಂಪುಟಗಳಾಗಿ ಪ್ರಕಟವಾಗಿತ್ತು. ಚೌಕಿಯ ಮನೆಯಲ್ಲಿ ಚಿಮಿಣಿ ದೀಪದ ಮಂದ ಬೆಳಕಿನಲ್ಲಿ ಅಪ್ಪ, ಅಣ್ಣಂದಿರು, ಅಡುಗೆ ಮನೆಯ ಕೆಲಸಗಳನ್ನು ಮುಗಿಸಿ ಜತೆ ಸೇರುತ್ತಿದ್ದ ಅತ್ತಿಗೆಯರು ಸುತ್ತ ಕುಳಿತಿದ್ದಾಗ ನಾನು ಇಲ್ಲವೇ ಎರಡನೇ ಅಕ್ಕ `ಕಾನೂರು ಹೆಗ್ಗಡಿತಿ'ಯ ಪುಟಗಳನ್ನು ಓದುತ್ತಿದ್ದೆವು. ಹೆಚ್ಚುಕಡಿಮೆ ನಮ್ಮೂರಿನ ಪರಿಸರದ ಕತೆಯನ್ನೇ ಕೇಳುತ್ತಿದ್ದ ಅವರಿಗೆ ಮನೆಯ ಸುತ್ತಮುತ್ತಲ ಕಾಡು, ಕೆರೆ, ಚೌಡಿ ಹರಕೆ, ಕಳ್ಳಿನ ಸೇವನೆ, ಶಿಕಾರಿ, ಸುಬ್ಬಮ್ಮನ ಬಾಯಲ್ಲಿ ಬರುತ್ತಿದ್ದ ದೇಸೀ ಬೈಗುಳದ ಮಾತುಗಳೆಲ್ಲ ಇಷ್ಟವಾದಂತಿದ್ದವು. ನಮ್ಮ ಸುತ್ತಮುತ್ತಲ ಸಣ್ಣ ಸಣ್ಣ ಕ್ಷುದ್ರ ಸಂಗತಿಗಳೆಲ್ಲ ಸಾಹಿತ್ಯಾಭಿವ್ಯಕ್ತಿಯ ವಸ್ತುಗಳಾಗಿ ಪರಿಣಮಿಸುತ್ತಿದ್ದ ಕಾರಣವೋ ಅವರು ಓದನ್ನು ಅಲ್ಲಲ್ಲಿ ನಿಲ್ಲಿಸುವಂತೆ ಹೇಳಿ ಆ ಘಟನೆಗಳಿಗೆ ತಮ್ಮದೇ ವ್ಯಾಖ್ಯಾನ ನೀಡುತ್ತಿದ್ದರು. ಶಿಕಾರಿಯ ಪ್ರಸ್ತಾಪ ಬಂದಾಗ ತಮ್ಮ ಅನುಭವಗಳನ್ನು ತಾಳೆ ನೋಡುತ್ತಿದ್ದರು. ಅಡಿಕೆ ಸುಲಿತದ ಸಂದರ್ಭದಲ್ಲಿ ನಮಗೆ ಹೀಗೆ ಓದಿಗೆ ಹಚ್ಚುತ್ತಿದ್ದ ಅಪ್ಪನ ಉದ್ದೇಶ ತಡರಾತ್ರಿಯ ನಿದ್ದೆಗಣ್ಣಿನಿಂದ ಅಡಿಕೆ ಸುಲಿಯುತ್ತಿರುವವರನ್ನು ಎಚ್ಚರದಿಂದ ಇರಿಸುವುದಾಗಿತ್ತು. ನಮ್ಮ ಓದಿನ ಸಾಮಥ್ರ್ಯವನ್ನು ಪರಿಶೀಲಿಸುವುದೂ ಆಗಿತ್ತು. ಒತ್ತಕ್ಷರ, ಸಂಯುಕ್ತಾಕ್ಷರದ ಪದಗಳಲ್ಲಿ ನಾಲಿಗೆ ತಡವರಿಸಿದಾಗ ಅಪ್ಪ ಅಡಿಕೆ ಸಿಪ್ಪೆಯಿಂದಲೇ ಗುರಿಯಿಟ್ಟು ತಲೆಗೆ ಹೊಡೆದು ನಮ್ಮನ್ನು ಸರಿದಾರಿಗೆ ತರುತ್ತಿದ್ದ.
ಅಡಿಕೆ ಸುಲಿತ ದಸರೆಯ ನಂತರ ಬರುತ್ತಿತ್ತು. ಆದರೆ ಅದಕ್ಕೂ ಮೊದಲಿನ ಶ್ರಾವಣ ಮಾಸ ನಮ್ಮ ಬಾಲ್ಯದ ಓದಿಗೆ ಮೊದಲ ವೇದಿಕೆ ಒದಗಿಸುತ್ತಿತ್ತು. ಅಪ್ಪನದು ಶನಿವಾರದ ವ್ರತ. ಅಂದು ಒಪ್ಪೊತ್ತಿನ ಊಟ. ಬೆಳಿಗ್ಗೆಯಿಂದ ಹಸಿದಿದ್ದು ಮಧ್ಯಾಹ್ನದ ವೇಳೆಗೆ ಮಿಂದು ಶುಚಿಯಾಗಿ ದೇವರ ಪೂಜೆ ಮಾಡಿ, ಮಡಿಯಲ್ಲಿ ಸಿದ್ಧಪಡಿಸಿದ ಊಟವನ್ನು ಅಗ್ನಿಗೆ ನೈವೇದ್ಯ ಮಾಡಿದ ನಂತರವೇ ಊಟ ಮಾಡುವುದು ಶನಿವಾರ ವ್ರತದ ವೈಶಿಷ್ಟ್ಯ. ಶನಿವಾರ ಅಪ್ಪನ ವ್ರತದ ದಿನವಾದ್ದರಿಂದ ಅಂದು ನಮ್ಮ ಮನೆಯಲ್ಲಿ ವಿಶೇಷ ಅಡುಗೆ ಇಲ್ಲ. ವಿಶೇಷವೆಂದರೆ ಮೀನು ಮಾಂಸದ ಖಾದ್ಯಗಳಿಲ್ಲ. ಶನಿವಾರ ಮನೆಗೆ ಅಪರೂಪದ ಅತಿಥಿಗಳು ಬಂದರೂ ಅವರಿಗೆ ಕೋಳಿ ಔತಣದ ಆತಿಥ್ಯ ಇರುತ್ತಿರಲಿಲ್ಲ.
ಶನಿವಾರದ ವ್ರತ ಹಿಡಿದಿದ್ದ ಕಾರಣ ಅಪ್ಪ ನಿತ್ಯವೂ ನಾಮ ಹಾಕಿಕೊಳ್ಳದೆ ಏನನ್ನೂ ಸೇವಿಸುತ್ತಿರಲಿಲ್ಲ. ಬೆಳಗಿನ ತಿಂಡಿ ಇಲ್ಲವೇ ಊಟಕ್ಕೆ ಅಡಿಗೆ ಮನೆಗೆ ಹೋಗುವ ಮೊದಲು ಅಂಗಳದಲ್ಲಿದ್ದ ತುಳಸಿ ಗಿಡದಿಂದ ಕುಡಿಯೊಂದನ್ನು ತಂದು, ಹುಣಸೇಹಣ್ಣಿನಿಂದ ಚೆನ್ನಾಗಿ ತಿಕ್ಕಿ ಥಳಥಳ ಹೊಳೆಯುವಂತೆ ಪರಿಶುದ್ಧಗೊಳಿಸಿದ ತೀರ್ಥದ ಗಿಂಡಿಯಲ್ಲಿ ಹಾಕಿಕೊಂಡು ಹಣೆಗೆ ನಾಮ ಹಚ್ಚಿಕೊಳ್ಳುವುದು ಪದ್ಧತಿ. ಅದಕ್ಕೊಂದು ಮರದ ನಾಮದ ಪೆಟ್ಟಿಗೆ. ಒಳಜಗುಲಿಯ ನಾಗಂದಿಗೆ ಮೇಲೆ ಇರಿಸುತ್ತಿದ್ದ ನಾಮದ ಪೆಟ್ಟಿಗೆಯನ್ನು ಎತ್ತಿಕೊಂಡು ತಮಗೆ ಬಾಲ್ಯದಿಂದ ಪಾಠವಾಗಿದ್ದ ದೇವರ ನಾಮಗಳನ್ನು ಗುನುಗುತ್ತಾ ನಾಮ ಹಚ್ಚಿಕೊಳ್ಳಲು ಕುಳಿತುಕೊಳ್ಳುತ್ತಿದ್ದ. ಕೆಂಪು ನಾಮವನ್ನು ಎಡ ಅಂಗೈಮೇಲೆ ಉದುರಿಸಿ ತೀರ್ಥದ ಬಟ್ಟಲಿನಿಂದ ಸ್ವಲ್ಪ ನೀರನ್ನು ಹಾಕಿ ನಯವಾಗಿ ಕಲೆಸಿ ಅದಕ್ಕೆಂದೇ ಇರಿಸಿದ್ದ ಬಿದಿರಿನ ನಾಮದ ಕಡ್ಡಿಯನ್ನು ಬಲಗೈಯಲ್ಲಿ ಹಿಡಿದು ನಾಮದಲ್ಲಿ ಅದ್ದಿ ಭ್ರೂಮಧ್ಯದಿಂದ ನೆತ್ತಿಯ ಕಡೆಗೆ ಒಂದು ಗೆರೆಯನ್ನು ಎಳೆದುಕೊಂಡರೆ ಹಣೆಯ ಅಲಂಕಾರ ಮುಗಿದಂತೆ. ಉಳಿದ ನಾಮವನ್ನು ಎದೆಯ ಎರಡೂ ಭಾಗಕ್ಕೆ ಮೂರು ಮೂರು ಗೆರೆಯಂತೆ ಎಳೆದುಕೊಳ್ಳುತ್ತಿದ್ದ. ಉದರ ಭಾಗದಲ್ಲಿ ಹೊಕ್ಕುಳಿನ ಆಜುಬಾಜು ಇನ್ನೂ ಮೂರು ಗೆರೆಗಳು. ಅಂಗೈಯಲ್ಲಿ ಉಳಿದಿರುವ ನಾಮದ ಉಳಿಕೆಯನ್ನು ತೀರ್ಥದ ಗಿಂಡಿಯಿಂದ ಇನ್ನಷ್ಟು ನೀರನ್ನು ಚಿಮುಕಿಸಿ ಎರಡೂ ಅಂಗೈಗಳಲ್ಲಿ ಲೇಪಿಸಿ ಎರಡೂ ಭುಜಗಳಿಗೆ ಒತ್ತಿ ನಾಮ ಲೇಪನವನ್ನು ಪರಿಸಮಾಪ್ತಿಗೊಳಿಸುತ್ತಿದ್ದ. ತುಳಸಿ ಕುಡಿಯನ್ನು ಅಂಗೈಯಲ್ಲಿ ಇಟ್ಟು ಅದಕ್ಕೆ ಗಿಂಡಿಯಿಂದ ಸ್ವಲ್ಪ ನೀರನ್ನು ಹಾಕಿ ಅದನ್ನು ತೀರ್ಥದಂತೆ ಕುಡಿಯುತ್ತಿದ್ದ. ತುಳಸಿಯ ಕುಡಿಯನ್ನು ಪರಮ ಶ್ರದ್ಧೆಯಿಂದ ಬಲ ಕಿವಿಗೆ ಸಿಕ್ಕಿಸಿಕೊಳ್ಳುತ್ತಿದ್ದ.
ಬೇಸಾಯದ ಕೆಲಸ ಇಲ್ಲದ ದಿನಗಳಲ್ಲಿ ಬೆಳಗಿನ ಹೊತ್ತು ಊಟ ಮಾಡುವಾಗ ನಾಮ ಹಚ್ಚಿಕೊಳ್ಳುವ ನೇಮ ಇರಿಸಿಕೊಂಡಿದ್ದ ಕಾರಣ ಈ ವಿಧಿಗಳೆಲ್ಲ ಯಾಂತ್ರಿಕವಾಗಿ ನಡೆಯುತ್ತಿದ್ದವು. ಬಾಯಲ್ಲಿ `ರಾಮಚಂದ್ರ, ವೆಂಕಟೇಶ, ಮಂಜುನಾಥ.. ಅಖಿಲಾಂಡಕೋಟಿ.. ಬ್ರಹ್ಮಾಂಡ ನಾಯಕ..' ಇತ್ಯಾದಿ ನೆನಪಿಗೆ ಬಂದ ಸ್ತುತಿ ಪದ್ಯಗಳು. ನಾಮ ಹಚ್ಚಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಮರಿಗಳನ್ನು ಕಟ್ಟಿಕೊಂಡು ಜಗುಲಿ ಹತ್ತಿ ಬಂದು ಕ್ಲಕ್ ಕ್ಲಕ್ ಸದ್ದಿನೊಂದಿಗೆ ಕಾಳು ಅರಸುತ್ತಿದ್ದ ಹೇಂಟೆಯನ್ನು ವಿಶಿಷ್ಟ ಸ್ವರ ಎಬ್ಬಿಸಿ ಓಡಿಸುವುದಕ್ಕೆ ಅವನಿಗೆ ಅಡ್ಡಿಯಾಗುತ್ತಿರಲಿಲ್ಲ. ಕೊಟ್ಟಿಗೆಯಿಂದ ಹೊರಬಿದ್ದ ಹಸುಗಳು ಮನೆ ಅಂಗಳಕ್ಕೆ ನುಗ್ಗಿದರೂ ಅವನ್ನು ಕೂಗಿಯೇ ಓಡಿಸುವುದಕ್ಕೂ ನಾಮ ಹಚ್ಚಿಕೊಳ್ಳುವಾಗಿನ ಸಂದರ್ಭ ಅಡ್ಡಿ ಬರುತ್ತಿರಲಿಲ್ಲ.
ಶ್ರಾವಣ ಮಾಸದಲ್ಲಿ ರಾಮಾಯಣ ಪಾರಾಯಣ ನಮ್ಮ ಬಾಲ್ಯದ ಓದಿನ ಕಾಲದಲ್ಲಿ ಜಾರಿಯಲ್ಲಿತ್ತು. ಅಪ್ಪ ತನ್ನ ತಿರುಗಾಟದ ಸಂದರ್ಭದಲ್ಲಿ ಕೊಂಡು ತಂದಿದ್ದ ಮಹಾಭಾರತ, ಸಚಿತ್ರ ರಾಮಾಯಣ ಕೃತಿಗಳು ಜಗುಲಿಯ ಅಟ್ಟಕ್ಕೆ ಬಟ್ಟೆಯೊಂದರ ರಕ್ಷಣೆಯಲ್ಲಿ ನೇತಾಡುತ್ತಿದ್ದವು. ಅವನ್ನು ಶ್ರಾವಣ ಮಾಸದ ಕಾಲದಲ್ಲಿ ಹೊರಕ್ಕೆ ತೆಗೆದು ದೂಳು ಹೊಡೆದು ಓದಿಗೆ ಅಣಿಗೊಳಿಸುವುದು ನಮ್ಮ ಕೆಲಸವಾಗಿತ್ತು. ಶ್ರಾವಣಮಾಸದ ಆರಂಭದಿಂದ ಅದು ಮುಗಿಯುವವರೆಗೆ ಪ್ರತಿ ರಾತ್ರಿ ಒಂದು ಒಂದೂವರೆ ಗಂಟೆ ರಾಮಾಯಣವನ್ನು ಓದಲಾಗುತ್ತಿತ್ತು. ಶಾಲೆ ಬಿಟ್ಟು ಮನೆ ಕೆಲಸಕ್ಕೆ ಬಂದಿದ್ದ ಮೂರನೇ ಅಣ್ಣ ಅದನ್ನು ಶ್ರದ್ಧಾಭಕ್ತಿಯಿಂದ ಆರಂಭಿಸುತ್ತಿದ್ದ. ಜಗುಲಿಯಲ್ಲಿ ಒಂದು ಕಾಲುಮಣೆಯನ್ನು ಇರಿಸಿ ಅದರ ಮೇಲೆ ಹಣತೆ ಇಟ್ಟು ಸೀತಾ, ರಾಮ, ಲಕ್ಷ್ಮಣ, ಹನುಮಂತ ಇರುವ ಫೋಟೋ ಇಟ್ಟುಕೊಂಡು ಹಣತೆಯ ಬೆಳಕಲ್ಲಿ ರಾಮಾಯಣ ಓದುವುದು ಪದ್ಧತಿ. ಅಣ್ಣ ಸ್ವಲ್ಪ ಹೊತ್ತು ಓದಿ ನನಗೆ ಬಿಟ್ಟು ಕೊಡುತ್ತಿದ್ದ. ಅಷ್ಟರವೇಳೆಗೆ ಗದ್ದೆ ಕೆಲಸ ಮುಗಿಸಿ ಬಚ್ಚಲಿನಲ್ಲಿ ಸ್ನಾನ ಮುಗಿಸಿ ಬಂದಿರುತ್ತಿದ್ದ ಅಣ್ಣಂದಿರು ಅಪ್ಪನ ಜೊತೆ ಜಗುಲಿಯಲ್ಲಿ ಕುಳಿತು ನನ್ನ ರಾಮಾಯಣದ ಓದನ್ನು ಗಮನಿಸುತ್ತಿದ್ದರು. ಕಥೆಯ ಮೇಲೆ ಅವರ ಗಮನ ಇರುತ್ತಿದ್ದರಿಂದ ಓದಿನ ತಪ್ಪನ್ನು ಅಲ್ಲಿಯೇ ತಿದ್ದಲು ಹೋಗುತ್ತಿರಲಿಲ್ಲ. ಆದ್ದರಿಂದ ರಾಮಾಯಣದ ಪಾರಾಯಣದ ಸಂದರ್ಭದಲ್ಲಿ ಅಡಿಕೆ ಸಿಪ್ಪೆಯ ಏಟಿನಿಂದ ತಪ್ಪನ್ನು ತಿದ್ದಿಕೊಳ್ಳ್ಳುವ ಅವಕಾಶ ನನಗೆ ಬರುತ್ತಿರಲಿಲ್ಲ.
ಮಾಧ್ಯಮಿಕ ಶಾಲೆಗೆ ರಿಪ್ಪನ್ಪೇಟೆಗೆ ಹೋಗುವವರೆಗಿನ ನಾಲ್ಕು ವರ್ಷ ಅಪ್ಪ ಅಣ್ಣಂದಿರ ನೇರ ಉಸ್ತುವಾರಿಯಲ್ಲಿ ಕನ್ನಡ ಓದನ್ನು ಅಭ್ಯಾಸ ಮಾಡಿದ ನನಗೆ ಮುಂದೆ ಅವರ ಮಾರ್ಗದರ್ಶನ ಇಲ್ಲದೆ ಹೋಯಿತು. ಸೋದರ ಮಾವನ ಮನೆಯಲ್ಲಿದ್ದು ಹೈಸ್ಕೂಲು ಶಿಕ್ಷಣವನ್ನು ಪೂರೈಸಿದ ನನಗೆ ವಾರ, ಎರಡು ವಾರಕ್ಕೊಮ್ಮೆ ಊರಿಗೆ ಹೋಗುತ್ತಿದ್ದ ಕಾರಣ ಅಪ್ಪನ ಶಿಕ್ಷಾ ವಲಯದಿಂದ ದೂರವೇ ಉಳಿದಿದ್ದೆ. ಪ್ರತಿ ವರ್ಷವೂ ಪಾಸಾಗುತ್ತಲೇ ಇದ್ದ ಕಾರಣ ಅಪ್ಪನಿಂದ ಓದಿನ ವಿಷಯದಲ್ಲಿ ಬೈಗುಳವನ್ನಾಗಲೀ ಏಟನ್ನಾಗಲೀ ಪಡೆಯುವ ಅವಕಾಶದಿಂದ ವಂಚಿತನಾಗಿದ್ದೆ. ಆದರೆ, `ಬೈದು ಹೇಳುವವ ಬದುಕಲು ಹೇಳಿದ', `ಒಳ್ಳೆಯವರೊಡನಾಡಿ ಕಳ್ಳನೊಳ್ಳಿದನಕ್ಕು, ಒಳ್ಳೆಯವ ಕಳ್ಳನೊಡನಾಡೆ ಅವ ಶುದ್ಧ ಕಳ್ಳನೇ ಅಕ್ಕು..' ಎಂಬಂಥ ಮಾತುಗಳನ್ನು ಆಯಾ ಸಂದರ್ಭದಲ್ಲಿ ಹೇಳುತ್ತ ನನ್ನಲ್ಲಿ ನೈತಿಕ ಪ್ರಜ್ಞೆಯನ್ನು ಜಾಗ್ರತಗೊಳಿಸುತ್ತಿದ್ದ ಅಪ್ಪ ನನ್ನ ಸ್ವತಂತ್ರ ನಿಧರ್ಾರಗಳನ್ನು ಯಾವತ್ತೂ ನಿರ್ಲಕ್ಷಿಸಲಿಲ್ಲ. ಮುಂದೆ ಶಿಕ್ಷಣದ ನಿಮಿತ್ತ ಉಚಿತ ವಿದ್ಯಾಥರ್ಿನಿಲಯದ ಸೌಲಭ್ಯ ಅರಸಿಕೊಂಡು ನಾನು ಬೆಂಗಳೂರಿಗೆ ಬಂದಾಗ, ನನಗೆ ಇಷ್ಟವೆಂದು ಕನ್ನಡ ಆನಸರ್್, ಎಂ ಎ ಕೋಸರ್ುಗಳಿಗೆ ಸೇರಿಕೊಂಡಾಗ ಅಪ್ಪ ಅವುಗಳ ಬಗ್ಗೆ ಅಭಿಪ್ರಾಯ ಕೊಡುವಂತಿರಲಿಲ್ಲ. `ಏನಾದರೂ ಓದು, ಆದರೆ ಇನ್ನೊಬ್ಬರಿಗೆ ಹೊರೆಯಾಗಬೇಡ. ಓದಿ ನೌಕರಿ ಹಿಡಿದು ನಿನ್ನ ಕಾಲ ಮೇಲೆ ನಿಲ್ಲು' ಎಂದಷ್ಟೆ ಹೇಳುತ್ತಿದ್ದ. ಎಂ ಎ ಪದವಿ ಗಳಿಸಿದ ಮೇಲೆ ಅಲ್ಪ ವೇತನದ ಸಣ್ಣ ಕೆಲಸವೊಂದು ಸಿಕ್ಕಿದಾಗ `ಸದ್ಯ ಅಷ್ಟಾದರೂ ಸಿಕ್ಕಿದೆಯಲ್ಲ' ಎಂದು ಸಮಾಧಾನಪಡಿಸಿದ್ದ.
`ಗುಡಿ ಚಚರ್ು ಮಸಜೀದಿಗಳ ಬಿಟ್ಟು ಹೊರಬನ್ನಿ' ಎಂಬ ಕವಿವಾಣಿಯನ್ನು ಬಲವಾಗಿ ನಂಬಿಕೊಂಡು ಅದರಂತೆ `ಆ ಮತದ ಈ ಮತದ ಹಳೆಮತದ ಸಹವಾಸ ಸಾಕಿನ್ನು' ಎಂದುಕೊಂಡವನಿಗೆ ಅಪ್ಪನಿಂದಲೂ ಆಕ್ಷೇಪ ಬರಲಿಲ್ಲ. ಮೂಲದಿಂದ ಗೇಣಿದಾರರಾಗಿ ಲಿಂಗಾಯತ ಒಡೆಯರ ದೌರ್ಜನ್ಯಕ್ಕೆ ಒಳಗಾಗಿದ್ದ ಅಪ್ಪನಿಗೆ ನಾನು ಸರಿಯಾದ ನೌಕರಿಯೂ ಇಲ್ಲದಿದ್ದಾಗ ಲಿಂಗಾಯತ ಹುಡುಗಿಯನ್ನು ಪ್ರೀತಿಯ ಕಾರಣ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಹೊರಟಾಗ ನನ್ನ ಹುಂಬತನವನ್ನು ಸಂಪೂರ್ಣ ಕ್ಷಮಿಸಿದ್ದಲ್ಲದೆ, `ಹುಡುಗಿಯ ಕಡೆಯವರು ಪ್ರಾಣಕ್ಕೆ ಅಪಾಯ ತಂದುಬಿಟ್ಟಾರೋ ಮಾರಾಯ' ಎಂದು ಎಚ್ಚರಿಸಿದ್ದ. ಸಂಗಾತಿಯನ್ನು ಗೆಳೆಯರಾದ ಬರುವೆ ತಿಮ್ಮಪ್ಪ ಮತ್ತು ನಾರಾಯಣ ಮೊಯ್ಲಿ ಅವರ ನೆರವಿನಿಂದ ಮೈಸೂರಿನಲ್ಲಿ ಆರ್ಯ ಸಮಾಜ ಪದ್ಧತಿಯನ್ವಯ ಮದುವೆಯಾಗಿ ಮರುದಿನವೇ ಪತ್ನಿ ಸಹಿತ ಊರಲ್ಲಿ ಅಪ್ಪ ಅವ್ವನ ಸಮ್ಮುಖ ಹಾಜರಾದಾಗ ಗದ್ದೆಕೊಯ್ಲಿನ ಹಂಗಾಮಿನಲ್ಲೂ ಅಂದು ಸಂಜೆ ನೂತನ ವಧೂವರರಿಗೆ ಸರಳವಾದ ಆರತಕ್ಷತೆಯನ್ನು ಏರ್ಪಡಿಸಿ ಸಂತೋಷಪಟ್ಟವನು ಅಪ್ಪ.
ಮನೆ, ಗಂಡ, ಮಕ್ಕಳ ಹಿತಚಿಂತನೆಯನ್ನೇ ಉಸಿರಾಗಿಸಿಕೊಂಡ ಅವ್ವ ಓದಿನ ಪ್ರಪಂಚದಿಂದ ತುಂಬ ದೂರ. ವಿದ್ಯಾಭ್ಯಾಸ, ಉದ್ಯೋಗದ ನೆಪದಲ್ಲಿ ಅಣ್ಣ, ನಾನು, ನನ್ನ ತಮ್ಮ ಮೂವರು ಏಕಕಾಲದಲ್ಲಿ ಬೇರೆ ಬೇರೆ ಊರುಗಳಲ್ಲಿದ್ದು ರಜೆ ಇದ್ದಾಗ ಇಲ್ಲವೇ ಹಬ್ಬದ ಸಂದರ್ಭಗಳಲ್ಲಿ ಊರಲ್ಲಿ ಒಟ್ಟಿಗೆ ಸೇರಿದಾಗ ಪಡುತ್ತಿದ್ದ ಸಂಭ್ರಮ ಮಾತಿಗೆ ನಿಲುಕುವಂಥದ್ದಲ್ಲ. ಒಬ್ಬೊಬ್ಬ ಮಗನೂ ಹೆಂಡತಿ ಮಕ್ಕಳೊಂದಿಗೆ ಊರಿನಿಂದ ನಿರ್ಗಮಿಸುವಾಗ ಮನೆಯಿಂದ ಸ್ವಲ್ಪ ದೂರದವರೆಗೆ ಬಂದು ಹನಿಗಣ್ಣಾಗಿ ಬೀಳ್ಕೊಡುತ್ತಿದ್ದ ದೃಶ್ಯ ನನ್ನನ್ನು ಬಹುಕಾಲ ಕಾಡಿಸುತ್ತಿತ್ತು. ಕಿರಿಯ ಮೂವರೂ ಮಕ್ಕಳು ನೌಕರಿ ಹಿಡಿದು ಬೇರೆ ಬೇರೆ ಊರುಗಳಲ್ಲಿ ತಮ್ಮ ತಮ್ಮ ಸಂಸಾರಗಳನ್ನು ನಿರ್ವಹಿಸುತ್ತಿದ್ದಾಗ ಅಪ್ಪ ಅವ್ವ ಇಬ್ಬರೂ ಬಂದು ಕೆಲವು ದಿನ ಇದ್ದು ಬದಲಾದ ಸನ್ನಿವೇಶಗಳಲ್ಲಿ ಹೆಚ್ಚು ಕಾಲ ಇರಲಾದರೆ ಊರಿಗೆ ವಾಪಸಾಗಿ ಬಿಡುತ್ತಿದ್ದರು. ಅಪ್ಪನ ಕೊನೆಯ ದಿನಗಳಲ್ಲಿ ಅವ್ವ ಅವನಿಗೆ ಮಾಡಿದ ಸೇವೆ, ಅಪ್ಪನ ನೇರ ನಿಷ್ಠುರ ನಡವಳಿಕೆ ನನ್ನ ಬರವಣಿಗೆಗೆ ಹೇಗೆಯೋ ಬದುಕಿಗೂ ಭದ್ರ ಅಡಿಪಾಯ ಹಾಕಿಕೊಟ್ಟಿರಬಹುದೇನೋ ಎಂಬ ಗುಮಾನಿ ನನ್ನದು.
ನಾನು ಎಂ ಎ ಮುಗಿಸಿ ಮೂರು ವರ್ಷ ವನವಾಸ- ಉಪವಾಸದ ನಂತರ ಬೆಂಗಳೂರಿನಲ್ಲಿ ಒಂದು ಕೆಲಸ ಹಿಡಿದು ನೆಲೆಗೊಂಡ ಹತ್ತು ವರ್ಷಗಳ ನಂತರ ಊರಲ್ಲಿದ್ದ ಅಪ್ಪನಿಗೆ ಪಾಶ್ರ್ವವಾಯು ಹಿಡಿದ ಸುದ್ದಿ ಬಂದಿತು. ಅದು ತಗುಲಿದ ಮೂರು ತಿಂಗಳ ಅವಧಿಯಲ್ಲಿ ಮಾತ್ರ ಅಪ್ಪನಿಗೆ ಬಂದು ಹೋಗುವವರ ಗುರುತು ಸಿಗುತ್ತಿತ್ತು. ನಂತರ ನೆನಪಿನ ಶಕ್ತಿ ಕುಂದಿತು. ಅವ್ವನ ನೆರವಿನಲ್ಲಿ ನಿಧಾನವಾಗಿ ಎದ್ದು ಓಡಾಡುತ್ತಿದ್ದವನು ಒಂದು ಬೆಳಿಗ್ಗೆ ಏಳಲೇ ಇಲ್ಲ. ಅಸಹಾಯಕತೆಯಿಂದ ಕಣ್ಣು ಬಿಡುತ್ತಿದ್ದ. ಆದರೆ ನಿತ್ಯಕರ್ಮಗಳು ಜರುಗುತ್ತಿದ್ದವು. ಗೊತ್ತಿಲ್ಲದಂತೆಯೇ ಹಾಸಿಗೆ ಒದ್ದೆಯಾಗುತ್ತಿತ್ತು. ಎಲ್ಲವೂ ಅಲ್ಲಿಯೇ ಆಗುತ್ತಿತ್ತು. ಬಾಯಿಗೆ ಅನ್ನ ಕಲೆಸಿ ಇಟ್ಟರೆ ಜಗಿದು ನುಂಗುತ್ತಿದ್ದ. ಆದ್ದರಿಂದ ಅವ್ವ ಹೊತ್ತಿಂದ ಹೊತ್ತಿಗೆ ಅನ್ನ ಸಾರು, ಮಜ್ಜಿಗೆ ಅನ್ನ ಇತ್ಯಾದಿ ಕಲೆಸಿ ಬಾಯಿಗಿಡುತ್ತಿದ್ದರು. ಅದನ್ನು ಬೇಕಾಗುವಷ್ಟು ತಿನ್ನುತ್ತಿದ್ದ. ಬೇಡವೆನ್ನಿಸಿದಾಗ ನಿಲ್ಲಿಸುತ್ತಿದ್ದ. ಹೊರಗಿನ ಪ್ರಜ್ಞೆ ಮರೆಯಾಗಿ ಹೋಗಿತ್ತು. ಹಾಸಿಗೆಯನ್ನು ನಿತ್ಯವೂ ಬದಲಿಸಬೇಕಿತ್ತು. ವಯಸ್ಕರ ಮೂತ್ರದ ವಾಸನೆ ಕಟು, ಸ್ವಲ್ಪ ಹೊತ್ತು ಬಿಟ್ಟರೆ ಇಡೀ ಜಗುಲಿ ವ್ಯಾಪಿಸುತ್ತಿತ್ತು. ಅದನ್ನು ತಕ್ಷಣವೇ ಸ್ವಚ್ಛಗೊಳಿಸಬೇಕಿತ್ತು. ಎಲ್ಲವನ್ನೂ ಅಪ್ಪನಿಗಿಂತ ನಾಲ್ಕೈದು ವರ್ಷವಷ್ಟೆ ವಯಸ್ಸಿನಲ್ಲಿ ಕಿರಿಯಳಾಗಿದ್ದ ಅವ್ವ ಯಾರೊಬ್ಬರ ನೆರವೂ ಇಲ್ಲದೆ ನಿರ್ವಹಿಸುತ್ತಿದ್ದರು. ಸ್ನಾನಕ್ಕೆ ಕರೆದೊಯ್ಯುವಾಗ ಮಾತ್ರ ಅಣ್ಣನ ಇಲ್ಲವೇ ಅಣ್ಣನ ಮಕ್ಕಳ ನೆರವನ್ನು ಪಡೆಯುತ್ತಿದ್ದರು.
ಸ್ವಲ್ಪ ಕಾಲದಲ್ಲಿ ಅಪ್ಪನಿಗೆ ಮಾತು ನಿಂತು ಹೋಯಿತು. ಯಾವ ಚಿಕಿತ್ಸೆಗೂ ಸ್ಪಂದಿಸುವಂತಿರಲಿಲ್ಲ. ಮಲಗಿದ ಭಂಗಿಯಲ್ಲಿಯೇ ಸ್ನಾನಕ್ಕೆ ಹೊತ್ತೊಯ್ಯುವುದು ಅನಿವಾರ್ಯವಾಗಿತ್ತು. ಅಲ್ಲಿ ಕುಚರ್ಿಯ ಮೇಲೆ ಪ್ರಯಾಸದಿಂದ ಕೂಡಿಸಿ ಹದವಾದ ಬಿಸಿನೀರಿನಿಂದ ಸ್ನಾನ ಮಾಡಿಸುತ್ತಿದ್ದರು ಅವ್ವ. ಸ್ನಾನದ ನಂತರ ಹಾಗೆಯೇ ಹೊತ್ತುಕೊಂಡು ಬರುವುದು, ಸಿದ್ಧಪಡಿಸಿದ ಹಾಸಿಗೆ ಮೇಲೆ ಮಲಗಿಸುವುದು. ಸದಾ ಮಲಗಿದ್ದರೆ ಬೆನ್ನು ತರಚಿ ಗಾಯವಾದರೆ ಮಾಯುವುದು ಕಷ್ಟ ಎಂದು ಅವ್ವ ಎಚ್ಚರಿಕೆಯಿಂದ ಅಪ್ಪನ ಮಗ್ಗಲು ಬದಲಿಸುತ್ತಾ ಬೆನ್ನಲ್ಲಿ ಹುಣ್ಣು ಆಗದಂತೆ ನೋಡಿಕೊಂಡಿದ್ದರು. ಸ್ನಾನ ಮಾಡಿಸಿದ ನಂತರ ಮೈ ಸಂದುಗಳಿಗೆಲ್ಲ ಪೌಡರು ಬಳಿಯುತ್ತಿದ್ದರೆ ಹಸುಗೂಸನ್ನು ನೋಡಿಕೊಳ್ಳುತ್ತಿದ್ದ ದಿನಗಳು ನೆನಪಿಗೆ ಬರುತ್ತಿದ್ದವು.
ಹೀಗೆ ನಾಲ್ಕು ವರ್ಷಗಳ ಕಾಲ ಅಪ್ಪ ಶರಶಯ್ಯೆಯಲ್ಲಿದ್ದ ಭೀಷ್ಮನಂತೆ ಮಲಗಿದ್ದ. ಅವನನ್ನು ಉಳಿಸಿಕೊಳ್ಳಲು ಅವ್ವ ಪಡುತ್ತಿದ್ದ ಪಾಡು ಯಾವ ಸಾಧ್ವಿ ಸಾವಿತ್ರಿಗೂ ಕಡಿಮೆ ಇದ್ದಂತೆ ತೋರಲಿಲ್ಲ. ಅಪ್ಪ ಚೇತರಿಸಿಕೊಂಡು ಎಲ್ಲರಂತೆ ಬದುಕುತ್ತಾನೆ ಎಂಬ ಭ್ರಮೆಯೇನೂ ಅವ್ವನಿಗೆ ಇರಲಿಲ್ಲ. ಆದರೆ ರುಗ್ಣಶಯ್ಯೆಯಲ್ಲಿದ್ದ ಗಂಡನ ಸೇವೆಯನ್ನು ಮಾಡಲೇಬೇಕೆಂಬ ಹೆಂಡತಿಯ ಧರ್ಮವನ್ನು ಅವ್ವ ಪಾಲಿಸುತ್ತಿದ್ದರು. ಒಂದು ಮಧ್ಯರಾತ್ರಿ ಅಪ್ಪನ ಕಡೆಯಿಂದ ಗೊರ ಗೊರ ಸದ್ದು ಕೇಳಿಬಂದು ಹಾಗೆಯೇ ಕ್ಷೀಣವಾಗಿ ಹೋದಾಗ ಅವ್ವ ಗಾಬರಿಯಾಗಿ ಎದ್ದು ದೀಪ ಹಾಕಿ ನಿರೀಕ್ಷಿತವಾಗಿದ್ದರೂ ಅಪ್ಪನ ಕೊನೆಯ ಕ್ಷಣಗಳನ್ನು ಅನಿರೀಕ್ಷಿತವೆಂಬಂತೆ ಎದುರಿಸಿ ಹಾಲನ್ನು ಗಂಟಲಿಗೆ ಗುಟುಕು ಗುಟುಕಾಗಿ ಬಿಟ್ಟರಂತೆ..
ಅಪ್ಪನನ್ನು ಏಕಾಂಗಿಯಾಗಿ ಕೊನೆಯ ಕ್ಷಣದವರೆಗೆ ನೋಡಿಕೊಂಡವರು ಅವ್ವ. ಅಪ್ಪ ಗತಿಸಿದಾಗ ಅವ್ವನಿಗೆ 80 ವರ್ಷ. ಬಹುಕಾಲದ ಸಂಗಾತಿಯನ್ನು ಕಳೆದುಕೊಂಡ ಶೋಕದಲ್ಲಿ ತಿಂಗಳ ಕಾಲ ಬಳೆಗಳನ್ನು ಹಾಕಿಕೊಳ್ಳಲು ಆಸಕ್ತಿ ತೋರಲಿಲ್ಲ. ಆದರೆ, ನಾವು ಮಕ್ಕಳು, ಒತ್ತಾಯ ಹಾಕಿದ ಮೇಲೆ ಬಳೆಯನ್ನೂ ಹೂವುಗಳನ್ನು ಮುಡಿದುಕೊಳ್ಳಲು ಉತ್ಸಾಹ ತೋರಿದರು. ಹಸುರು ಬಳೆಗಳೆಂದರೆ ಅವ್ವನಿಗೆ ತುಂಬ ಇಷ್ಟ. ಅವುಗಳನ್ನು ನಾವು ತಂದು ತೊಡಿಸಿದಾಗ ಅವರ ಕಣ್ಣಲ್ಲಿ ಮಿಂಚಿನಂತೆ ಹನಿಗಳು ಉದುರುತ್ತಿದ್ದುದನ್ನು ನೋಡಿ ನಮಗೂ ಕಣ್ಣೀರು ತಡೆದುಕೊಳ್ಳಲಾಗುತ್ತಿರಲಿಲ್ಲ. ಅಪ್ಪ ಗತಿಸಿದ 15 ವರ್ಷಗಳ ನಂತರವೂ ಅಪರಿಮಿತ ಜೀವನೋತ್ಸಾಹ ಪ್ರದಶರ್ಿಸುತ್ತಿದ್ದ ಅವ್ವ ನಮ್ಮ ಬಂಧುಗಳ ಯಾವೊಂದು ಸಮಾರಂಭಕ್ಕೂ ಶೋಭೆ ತಂದು ಕೊಡುತ್ತಿದ್ದರು. ವೈಯಕ್ತಿಕ ಸ್ವಚ್ಛತೆಗೆ ತುಂಬ ಗಮನ ಕೊಡುತ್ತಿದ್ದ ಅವ್ವ 98ರ ವಯಸ್ಸಿನಲ್ಲಿಯೂ ತಮ್ಮ ಬಾಲ್ಯಕಾಲದ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮಕ್ಕಳು ಮೊಮ್ಮಕ್ಕಳು ಕೇಳುವ ಉತ್ಸಾಹ ತೋರಿದಾಗ ತಮ್ಮದೇ ಧಾಟಿಯಲ್ಲಿ ನಿರೂಪಿಸುತ್ತಿದ್ದರು. ಅವರ ಸುದೀರ್ಘ ಬದುಕು ಮತ್ತು ಜೀವನೋತ್ಸಾಹ ನನ್ನ ಬದುಕನ್ನು ಮಾತ್ರವಲ್ಲದೆ ಬರವಣಿಗೆಗೂ ಪ್ರೇರಕವಾಗಿದೆ. (ಮುಂದುವರಿಯಲಿದೆ... )

Very good. Can't wait for next installment.
ReplyDelete